ಎಡಿನ್‍ಬರೊ
	ಸ್ಕಾಟ್ಲೆಂಡಿನ ಮುಖ್ಯಪಟ್ಟಣ. ಮಿಡ್‍ಲೋಥಿಯನ್ ಪ್ರದೇಶದ ಆಡಳಿತ ನಗರವೂ ಆಗಿದ್ದು ಸ್ಕಾಟ್ಲೆಂಡಿನ ಆಗ್ನೇಯ ಭಾಗದಲ್ಲಿ ಫರ್ತ್-ಆಫ್-ಫೋರ್ತ್ ತೀರಪ್ರದೇಶದಲ್ಲಿ 10 ಮೈಲಿ ವಿಸ್ತಾರವಾಗಿದೆ. ಗ್ಲಾಸ್ಗೋ ನಗರದ ಪೂರ್ವಕ್ಕೆ 42 ಮೈಲಿ ಮತ್ತು ಲಂಡನ್‍ನಿಂದ ಉತ್ತರಕ್ಕೆ 303 ಮೈಲಿ ದೂರದಲ್ಲಿದೆ. ಜನಸಂಖ್ಯೆ 4,68,361(1961). ಪೂರ್ವದಿಕ್ಕಿನಿಂದ ನೋಡುವಾಗ ಸಮುದ್ರ ಮಟ್ಟದಿಂದ 823 ಅಡಿಗಳೆತ್ತರದ ಅರ್ಥರನ ಸ್ಥಾನವೆಂಬ ಗುಡ್ಡದ ಮುಂಭಾಗದಲ್ಲಿ ಕೋಟೆಯೂ ಹಳೆಯ ನಗರವೂ ಕೋಟೆಯ ಉತ್ತರಕ್ಕೆ ಜಾರ್ಜಿಯನ್ ಕಾಲದ ಹೊಸ ನಗರವೂ ಕಾಣುತ್ತದೆ.

	ನೆರೆಹೊರೆಯ ಬುರ್ಡ್‍ಹೌಸಿನ ಸುಣ್ಣಕಲ್ಲು, ಹೇಯ್‍ಲ್ಸ್, ಸ್ಲೇಟ್‍ಫರ್ಡ್, ಗ್ರಾಂಪಿನ್ ಮತ್ತು ಕ್ರೇಗ್‍ಲೀತ್ ಪ್ರದೇಶಗಳ ಮರಳು ಕಲ್ಲುಗಳನ್ನು ಈ ನಗರದ ಕಟ್ಟಡಗಳಿಗೆ ಉಪಯೋಗಿಸಲಾಗಿದೆ. ಪುರಾತನ ಕಾಲದಲ್ಲಿ ಭೂಮಿಯ ಸರಿಯುವಿಕೆಯಿಂದ ಮೇಲೆದ್ದ ಹಲವಾರು ಬೆಟ್ಟಗಳೂ ಅಗ್ನಿಪರ್ವತ ಸ್ಫೋಟದಿಂದ ಹುಟ್ಟಿಕೊಂಡ ಕೆಲವು ಗುಡ್ಡಗಳೂ ನಗರದ ಪರಿಸರದಲ್ಲಿ ಕಂಡುಬರುತ್ತದೆ. ಪ್ಲಿಸ್ಟೋಸೀನ್ ಹಿಮಪ್ರವಾಹಕ್ಕೆ ಸಿಲುಕಿ ಒಡೆದು ಈ ಬೆಟ್ಟಗುಡ್ಡಗಳು ಈಗಿನ ರೂಪವನ್ನು ಪಡೆದಿವೆ.

	ಸಾಹಿತ್ಯದಲ್ಲಿ ಡುನ್‍ಡಿನೆ ಎಂದೂ, ಉತ್ತರ ಅಥವಾ ಆಧುನಿಕ ಅಥೆನ್ಸ್ ಎಂದೂ ಹೆಸರಾಗಿರುವ ಈ ನಗರದಲ್ಲಿ ಉತ್ತಮ ಶೈಲಿಯ ಅನೇಕ ಭವನಗಳಿರುವುದಲ್ಲದೆ ಐತಿಹಾಸಿಕ, ಕಲಾತ್ಮಕ ಮತ್ತು ಪ್ರಾಕೃತಿಕ ವಿಶೇಷಗಳೂ ಇವೆ. 1947ರಲ್ಲಿ ಸಂಗೀತ ನೃತ್ಯನಾಟಕ ಮತ್ತು ಕಲಾಪ್ರದರ್ಶನಗಳಿಗೆ ಮೀಸಲಾದ ಎಡಿನ್‍ಬರೊ ಅಂತರರಾಷ್ಟ್ರೀಯ ಉತ್ಸವ ಪ್ರಾರಂಭವಾಯಿತು.

	ಪುರಾತನ ಕಾಲದಿಂದಲೂ ಇಲ್ಲಿ ಜನವಸತಿಯಿದ್ದುದಾಗಿ ಹೇಳಲಾದರೂ ರೋಮನರ ಕಾಲದಲ್ಲೂ ಈ ನಗರದ ವಿಷಯವೇನೂ ಗೊತ್ತಾಗಿಲ್ಲ. ಕ್ರಿ.ಶ.6ನೆಯ ಶತಮಾನದಲ್ಲಿ ಇದರ ಉಲ್ಲೇಖವಿದೆ. 1058-93ರ ಕಾಲದಲ್ಲಿ ಆಳಿದ ಮೂರನೆಯ ಮಾಲ್ಕಾಮನ ಕಾಲದಲ್ಲಿ ಆತ ತನ್ನ ರಾಣಿ ಸಂತ ಮಾರ್ಗರೆಟಳೊಡನೆ ಇಲ್ಲಿ ವಾಸಿಸುತ್ತಿದ್ದುದಾಗಿಯೂ ಆಕೆಯ ಸ್ಮಾರಕಾರ್ಥವಾಗಿ 12ನೆಯ ಶತಮಾನದ ಆದಿಭಾಗದಲ್ಲಿ ಒಂದು ಮಂದಿರವನ್ನು ಸ್ಥಾಪಿಸಿದುದಾಗಿಯೂ ಖಚಿತವಾಗಿ ತಿಳಿದು ಬಂದಿದೆ. ಆ ಸ್ಮಾರಕ ಮಂದಿರ ಈಗಲೂ ಉಳಿದು ಬಂದಿದೆ. ಮೊದಲನೆಯ ಡೇವಿಡನ ಕಾಲದಲ್ಲಿ (1124-53) ನಗರ ಅಭಿವೃದ್ಧಿಹೊಂದಿ ಹೋಲಿರೂಡ್ ಚರ್ಚು ನಿರ್ಮಿತವಾಯಿತು. ಆ ಕಾಲದಲ್ಲಿ ಕ್ಯಾನನ್‍ಗೇಟ್ ಎಂಬ ಹೆಸರಿನಿಂದ ನಗರ ದರ್ಜೆಯನ್ನು ಪಡೆಯಿತೆಂದು ಹೇಳಲಾಗಿದ್ದರೂ ಒಂದನೆಯ ರಾಬರ್ಟ್ ಬ್ರೂಸ್ 1329ರಲ್ಲಿ ನೀಡಿದ ಸನ್ನದೇ ಈ ನಗರಕ್ಕೆ ಸಂಬಂಧಿಸಿದ ಅತ್ಯಂತ ಪುರಾತನ ದಾಖಲೆ. ಸ್ವಾತಂತ್ರ್ಯ ಸಮರದಲ್ಲಿ ಈ ಪ್ರದೇಶ ಅಡಿಗಡಿಗೆ ದಾಳಿಗಳನ್ನೆದುರಿಸಬೇಕಾಗಿ ಬಂದರೂ ಎರಡನೆಯ ಡೇವಿಡನ ಕಾಲದಲ್ಲಿ ಬಹುಮಟ್ಟಿಗೆ ಚೇತರಿಸಿಕೊಂಡಿತು. ಆವರೆವಿಗೂ ರಾಜಧಾನಿ ಪರ್ತ್‍ನಗರದಲ್ಲಿದ್ದು ಎರಡನೆಯ ಜೇಮ್ಸನ ಕಾಲದಲ್ಲಿ (1437-60) ಎಡಿನ್‍ಬರೊಗೆ ವರ್ಗಾವಣೆಗೊಂಡಿತು. ಇಲ್ಲಿ ಪಾರ್ಲಿಮೆಂಟು ಸೇರುತ್ತಿದ್ದುದಲ್ಲದೆ ನಗರಸಭೆಯೂ ಸ್ಥಾಪಿತವಾಯಿತು. ಎರಡನೆಯ ರಾಜಮಾರ್ಗ ನಿರ್ಮಿತವಾಯಿತು. ಹೊಸ ಕೋಟೆಯ ಗೋಡೆ ಎದ್ದಿತು. ಅದರ ಅವಶೇಷಗಳನ್ನೂ ಈಗಲೂ ಕಾಣಬಹುದು. ಮೂರನೆಯ ಜೇಮ್ಸನ ಕಾಲದಲ್ಲಿ ರಾಜಮನ್ನಣೆ ಪಡೆದು, 1583ರಲ್ಲಿ ನಾಲ್ಕನೆಯ ಜೇಮ್ಲನಿಂದ ನಗರಾಡಳಿತ ವ್ಯವಸ್ಥೆಗೊಳಿಸಲ್ಪಟ್ಟಿತು. 1532ರಲ್ಲಿ ನ್ಯಾಯಶಾಸ್ತ್ರ ಕಾಲೇಜು ಸ್ಥಾಪಿತವಾಯಿತು. 1544ರಲ್ಲಿ ಇಂಗ್ಲಿಷ್ ಸೈನ್ಯದ ದಾಳಿಗೊಳಗಾದರೂ ಸುಧಾರಿತ ಚರ್ಚಿನ ಮಹಾಧಿವೇಶನ ಇಲ್ಲಿ ಸೇರಿ ನಗರದ ಪ್ರಾಶಸ್ತ್ಯವನ್ನು ಹೆಚ್ಚಿಸಿತು. 1603ರಲ್ಲಿ ಸಂಭವಿಸಿದ ರಾಜಾಧಿಕಾರ ಐಕ್ಯದ ದಿಶೆಯಿಂದ ರಾಜಾಸ್ಥಾನ ಇಂಗ್ಲೆಂಡಿಗೆ ವರ್ಗಾವಣೆಗೊಂಡು ಇದರ ಘನತೆ ಕುಂದಿದರೂ 1633ರಲ್ಲಿ ಒಂದನೆಯ ಚಾರಲ್ಸ್ ಇದಕ್ಕೆ ನಗರಮನ್ನಣೆಯಿತ್ತು. ಸಂತ ಗೈಲ್ಸ್ ಚರ್ಚನ್ನು ಬಿಷಪನ ಅಧಿಕಾರ ಸ್ಥಾನವನ್ನಾಗಿ ಮಾಡಿದುದರಿಂದ ಇದರ ಮಹತ್ತ್ವ ಬೆಳೆಯಿತು. ಪಾರ್ಲಿಮೆಂಟು ಭವನ, ಹೆರಿಯಟ್ಟನ ವೈದ್ಯಶಾಲೆಗಳು ಟೆಲ್ಪರನ ಗೋಡೆ (ಪುರಾತನ ಕೋಟೆಯ ವಿಸ್ತರಣೆ) ಮೊದಲಾದವು ನಿರ್ಮಿತವಾದುವು. 1636-49ರ ಕಾಲದಲ್ಲಿ ನೆರೆಹೊರೆಯ ಹಲವು ಭಾಗಗಳು ಈ ನಗರದ ಎಲ್ಲೆಗೆ ಸೇರಿದುವು. 1650ರ ಡನ್‍ಬಾರ್ ಕದನದಲ್ಲಿ ಎಡಿನ್‍ಬರೊ ಆಲಿವರ್ ಕ್ರಾಮ್‍ವೆಲನ ವಶವಾಯಿತು. 1707ರಲ್ಲಿ ಸ್ಕಾಟ್ಲೆಂಡು-ಇಂಗ್ಲೆಂಡುಗಳ ವಿಲೀನಶಾಸನ ಜಾರಿಗೆ ಬಂದುದರ ವಿರುದ್ಧ 1736ರಲ್ಲಿ ನಡೆದ ಜಾನ್‍ಪೊರ್ಟಿಯಸನ ದಂಗೆಗಳ ಫಲವಾಗಿ ನಗರದ ಮಹತ್ತ್ವ ನಶಿಸಿದರೂ 18ನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತೆ ಪ್ರಾಮುಖ್ಯಕ್ಕೆ ಬಂತು. ಮುಂದೆ ಸರ್ವತೋಮುಖವಾಗಿ ಬೆಳೆದುದೇ ಅಲ್ಲದೆ ಆಲಾನ್ ರ್ಯಾಮ್ಸೆ, ಹೆನ್ರಿ ರೇಬರ್ನ್, ರಾಬರ್ಟ್ ಆಡಮ್, ಪ್ರಿ. ವಿಲಿಯಂ ರಾಬರ್ಟ್‍ಸನ್ ಮುಂತಾದ ಮಹಾವ್ಯಕ್ತಿಗಳ ವಾಸಸ್ಥಾನವಾಗಿ ಶೋಭಿಸಿತು. 1767ರ ಶಾಸನದ ಪ್ರಕಾರ ಹೊಸನಗರ ಜೇಮ್ಸ್ ಕ್ರೇನನ ನಕ್ಷೆಗನುಸಾರವಾಗಿ ನಿರ್ಮಿತವಾಯಿತು. 19-20ನೆಯ ಶತಮಾನಗಳಲ್ಲಿ ಅನೇಕ ಕಟ್ಟಡಗಳು ನಿರ್ಮಿತವಾದುದಲ್ಲದೇ ಪ್ರಥಮ ಮತ್ತು ದ್ವಿತೀಯ ಜಾಗತಿಕ ಮಹಾಯುದ್ಧಗಳ ಅನಂತರ ಅನೇಕ ವಿಸ್ತರಣಗಳೂ ಸೇರಿ ನಗರ ಬಡಾಯಿಸುತ್ತಿದೆ.

	ಕೋಟೆಯ ಸುತ್ತಲೂ ಪ್ರಸರಿಸಿರುವ ಹಳೆಯ ನಗರ ಪುರಾತನ ಮತ್ತು ಐತಿಹಾಸಿಕ ಅವಶೇಷಗಳ ಅಗರವಾಗಿದೆ. ಸುಮಾರು 11ನೆಯ ಶತಮಾನದಿಂದ ನಡೆದುಬಂದಿರುವ ಈ ನಗರ ಫೋರ್ತ್ ನದಿಯ ಮುಖಜಭೂಮಿಯಲ್ಲಿ ವಿಶಾಲವಾದ ಬಂಡೆಯೊಂದರ ತಪ್ಪಲು ಪ್ರದೇಶದಲ್ಲಿ ನೆಲೆಸಿದ್ದು ಸುತ್ತಲೂ ಕೋಟೆಯಿಂದ ಆವೃತವಾಗಿದೆ. ಸುಮಾರು ಆರನೆಯ ಶತಮಾನದಿಂದ ಕೋಟೆ ಬಳಕೆಯಲ್ಲಿದ್ದರೂ ಎಡೆಬಿಡದೆ ನಡೆದು ಬಂದ ವಸತಿಯ ಕಾರಣದಿಂದ 11ನೆಯ ಶತಮಾನಕ್ಕಿಂತಲೂ ಮೊದಲಿನ ಅವಶೇಷಗಳೇನೂ ಕಂಡುಬಂದಿಲ್ಲ. ಈಗ ಉಳಿದು ಬಂದಿರುವ ಪುರಾತನ ಕಟ್ಟಡಗಳನ್ನು ಬಹುಮಟ್ಟಿಗೆ ಜೀರ್ಣೋದ್ಧಾರ ಮಾಡಲಾಗಿದೆ. ಅವು ವಾಸ್ತುಶಿಲ್ಪ ದೃಷ್ಟಿಯಿಂದಲ್ಲದಿದ್ದರೂ ಐತಿಹಾಸಿಕ ದೃಷ್ಟಿಯಿಂದ ಮಹತ್ತ್ವ ಪಡೆದಿದೆ. 16ನೆಯ ಶತಮಾನದಲ್ಲಿ ಸ್ಕಾಟರ ರಾಣಿ ಮೇರಿಯ ಕಾಲದಿಂದ (1542-87) ಉಳಿದು ಬಂದಿರುವ ಕಟ್ಟಡಗಳೇ ಹೆಚ್ಚಾಗಿವೆ. ಇವುಗಳಲ್ಲಿ ಸಂತ ಮಾರ್ಗರೆಟ್ಟಳ ಸ್ಮಾರಕಮಂದಿರವೇ ಬಹಳ ಪುರಾತನವಾದುದು. ಸರಳ ಆಯಾಕಾರದ ಈ ಮಂದಿರದಲ್ಲಿ ಈಗಲೂ ಒಮ್ಮೊಮ್ಮೆ ಪ್ರಾರ್ಥನೆ ಸಭೆ ನಡೆಯುವುದುಂಟು. ಇದರ ಬಳಿಯಿರುವ ಗೋಪುರ ಭವನದ ಅವಶೇಷಗಳು ಮಧ್ಯಕಾಲೀನ ಸ್ಕಾಟಿನ ಕೋಟೆಗಳ ಶೈಲಿಗೆ ಸೇರಿವೆ. ಕೋಟೆಯ ಉನ್ನತ ಭಾಗದಲ್ಲಿನ ಕಟ್ಟಡಗಳನ್ನು ಅರಮನೆಯ ಆಯಾಕಾರದ ಪ್ರಾಂಗಣದಲ್ಲಿ ಕಟ್ಟಲಾಗಿದೆ. ಪೂರ್ವ ಭಾಗದಲ್ಲಿರುವ ಅರಮನೆಯ ಒಂದು ಭಾಗದಲ್ಲಿ 16ನೆಯ ಶತಮಾನಕ್ಕೆ ಸೇರಿದ ಸ್ಕಾಟರ ಕಿರೀಟ, ಅಧಿಕಾರದಂಡ, ಪಟ್ಟದಕತ್ತಿ ಮುಂತಾದ ರಾಜ ಚಿಹ್ನೆಗಳನ್ನು ನಿಕ್ಷೇಪಿಸಿಡಲಾಗಿದೆ. ಈ ಭಾಗದಲ್ಲೇ ಸ್ಕಾಟರರಾಣಿ ಮೇರಿ ಮತ್ತವಳ ತಾಯಿಯ ವಾಸಗೃಹಗಳೂ ಇವೆ. ಉತ್ತರ ಭಾಗದಲ್ಲಿ 12ನೆಯ ಶತಮಾನದ ಚರ್ಚೊಂದರ ನಿವೇಶನದಲ್ಲಿ. ಸರ್ ರಾಬರ್ಟ್ ಲೊರಿಮರನಿಂದ ರೂಪಿತವಾಗಿ 1927ರಲ್ಲಿ ಕಟ್ಟಲ್ಪಟ್ಟ ಸ್ಕಾಟರ ರಾಷ್ಟ್ರೀಯ ಸಂಗ್ರಾಮ ಸ್ಮಾರಕವಿದೆ. ಅರಮನೆಯ ಪ್ರಾಂಗಣದಲ್ಲಿ ಸ್ಕಾಟರ ಐಕ್ಯ ಸೇನಾಪಡೆಗಳ ವಸ್ತುಪ್ರದರ್ಶನ ಶಾಲೆ ಇದೆ. ಈ ದಿಬ್ಬದ ಮೇಲಿಂದ ಸುರುಳಿಯಂತೆ ಸುತ್ತಿಕೊಂಡು ಬರುವ ರಸ್ತೆಯ ಮೂಲಕ ಇಳಿದು ಬಂದರೆ 1574ರಲ್ಲಿ ಮಾರ್ಟಿನ್ನಿನ 4ನೆಯ ಜಮೀನ್ದಾರ ಜೇಮ್ಸ್ ಡೌಗ್ಲಸನಿಂದ ನಿರ್ಮಿತವಾದ ಅರ್ಧಚಂದ್ರಾಕೃತಿಯ ಬತೇರಿ ಇದೆ.

	ಹಳೆಯನಗರದಲ್ಲಿ ಕೋಟೆಯ ಮುಂಭಾಗದಲ್ಲಿ ಒಂದನೆಯ ಡೇವಿಡನಿಂದ 1128ರಲ್ಲಿ ನಿರ್ಮಿತವಾಗಿ 1220ರ ಸುಮಾರಿನಲ್ಲಿ ಜೀರ್ಣೋದ್ಧಾರ ಹೊಂದಿದ. ಆಗಸ್ಟಿನಿಯನ್ ಸಂಪ್ರದಾಯಕ್ಕೆ ಸೇರಿದ ಹೋಲಿರೂಡ್ ಕ್ರೈಸ್ತಮಠ ಆ ಕಾಲದ ಬ್ರಿಟಿಷ್ ವಾಸ್ತುಶಿಲ್ಪಗಳಲ್ಲಿ ಗಮನಾರ್ಹ ಸ್ಥಾನ ಪಡೆದಿದೆ. ಅದರ ನಿವೇಶನದ ಪಕ್ಕದಲ್ಲಿ 1505ರಲ್ಲಿ ನಾಲ್ಕನೆಯ ಜೇಮ್ಸನಿಗಾಗಿ ಕಟ್ಟಲ್ಪಟ್ಟ ಹೋಲಿರೂಡ್ ಅರಮನೆಯ ವಿಸ್ತರಣ ಕಾರ್ಯ 1671ರಲ್ಲಿ ನಡೆಯಿತು. ಈ ಕ್ರೈಸ್ತಮಠದ ಹಲವಾರು ಭಾಗಗಳಿಗೂ ರಾಣಿ ಮೇರಿಯ ಜೀವನಕ್ಕೂ ನಿಕಟ ಸಂಬಂಧವಿತ್ತು. ಹಳೆಯ ಗೋಪುರ ವಾಸ್ತವವಾಗಿ ಮಧ್ಯಯುಗಕ್ಕೆ ಸೇರುತ್ತಿದ್ದರೂ ಸುತ್ತಲಿನ ಅರಮನೆಯ ಭಾಗಗಳು ಅನಂತರದ ವಿಸ್ತರಣ ಕಾಲಕ್ಕೆ ಸೇರುತ್ತವೆ. ಈ ಅರಮನೆ ಬ್ರಿಟಿಷ್ ಚಕ್ರವರ್ತಿಯ ಸ್ಕಾಟ್ಲೆಂಡಿನ ಅಧಿಕೃತ ನಿವಾಸವಾಗಿದೆ.

	ಹಳೆಯ ನಗರದಲ್ಲಿನ ವಾಸಗೃಹಗಳನ್ನು ಬಲವಾಗಿ ಮರದ ಸಾಮಾನುಗಳಿಂದ ಕಟ್ಟಲಾಗಿದೆ. ಇವುಗಳ ಮುಂಭಾಗದಲ್ಲಿ ಇಕ್ಕಟ್ಟಾದ ಅಂಗಳ, ಹಿಂಭಾಗದಲ್ಲಿ ವಿಶಾಲವಾದ ಕೈ ತೋಟಗಳಿವೆ. 17ನೆಯ ಶತಮಾನಕ್ಕಿಂತ ಮೊದಲಿನ ಕಟ್ಟಡಗಳು ಬಹುವಾಗಿ ಕಣ್ಮರೆಯಾಗಿ ಅನಂತರದ ಕಟ್ಟಡಗಳೇ ಈಗ ಕಾಣುತ್ತವೆ. ಈ ಭಾಗದಲ್ಲಿ ಪುರಾತನ ಕಾಲದ ಷೂಮೇಕರ್ಸ್ ಲ್ಯಾಂಡ್, ಬೈಬಲ್ ಲ್ಯಾಂಡ್, ವಲ್ಡ್ರ್ಸ್ ಎಂಡ್- ಮುಂತಾದ ಹೆಸರಿನ ಪ್ರದೇಶಗಳೂ ಲಾನ್ ಮಾರ್ಕೆಟ್, ಹೇ ಮಾರ್ಕೆಟ್, ಕೌಗೇಟ್, ಕ್ಯಾನನ್‍ಗೇಟ್ ಮುಂತಾಗಿ ಸ್ಥಳ ವೈಶಿಷ್ಟ್ಯವನ್ನು ಸೂಚಿಸುವ ಹೆಸರಿನ ಪ್ರದೇಶಗಳೂ ಇವೆ. ಹಳೆಯ ನಗರದ ಮುಖ್ಯ ಕಟ್ಟಡಗಳಲ್ಲಿ ನೆದರ್‍ಬೊ ಪೋರ್ಟ್, ಜಾನ್ ನಾಕ್ಸನ ಭವನ, ಸುಮಾರು 800 ವರ್ಷಗಳ ಸಂತ ಗೈಲ್ಸ್ ಚರ್ಚು, 1637ರಲ್ಲಿ ಕಟ್ಟಲಾದ ಟ್ರಾನ್ ಚರ್ಚು, ಟ್ರಿನಿಟಿ ಕಾಲೇಜಿನ ಚರ್ಚು, ಈಗ ವಸ್ತುಪ್ರದರ್ಶನ ಶಾಲೆಯಾಗಿರುವ ಟಾಲ್ಬೂತ್ (1591) ಹಂಟ್ಲಿ ಭವನ (17ನೆಯ ಶತಮಾನ) ಗ್ರೇ ಫ್ರಯರ್ಸ್ ಚರ್ಚು (1614)- ಇವು ಗಮನಾರ್ಹವಾದುವು.

	17ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಹಳೆಯ ನಗರ ಹೆಚ್ಚು ಜನಭರಿತವಾದುದರಿಂದ 1753ರಲ್ಲಿ ವಾಸ್ತುಶಿಲ್ಪಿಗಳಾದ ಜಾನ್ ಮತ್ತು ರಾಬರ್ಟ್ ಆಡಮ್ಸ್ ಸಹೋದರರ ನಕ್ಷೆಯ ಪ್ರಕಾರ ಹೊಸನಗರದ ನಿರ್ಮಾಣಕಾರ್ಯ ಪ್ರಾರಂಭವಾಯಿತು. 1760ನೆಯ ದಶಕದಲ್ಲಿ ಹೊಸ ಸೇತುವೆಯ ನಿರ್ಮಾಣವಾಗಿ ನಾರ್ತ್ ಲಾಕ್ ಅಣಿಕಟ್ಟನ್ನು ಒಣಗಿಸಿ ಈ ವಿಸ್ತಾರ ಪ್ರದೇಶವನ್ನು ಪರಿವರ್ತಿಸಿದಾಗ ಹೊಸ ನಗರ ಮುಕ್ತಾಯ ಘಟ್ಟವನ್ನು ತಲುಪಿತೆಂದು ಹೇಳಬಹುದು. ಹೊಸನಗರದ ಅನೇಕ ಕಟ್ಟಡಗಳು 1768-1850 ಮಧ್ಯಕಾಲದಲ್ಲಿ ನಿರ್ಮಿತವಾದುವು. ಇಲ್ಲಿನ ಅತ್ಯಂತ ಸುಂದರಭಾಗ ಚಾರ್ಲಾಟ್ ಚೌಕ. ಮೋರೆ ಪ್ರದೇಶ ಗ್ರೇಟ್ ಕಿಂಗ್ ಮಾರ್ಗ, ಸಂತ ಬರ್ನಾರ್ಡ್ ಕ್ರೆಸೆಂಟ್- ಇವು ಸಹ ಗಮನಾರ್ಹ ಪ್ರದೇಶಗಳು. ಮೆಲ್ವಿಲೇ ಮಾರ್ಗ, ಕ್ವೀನ್ ರಸ್ತೆ ಮತ್ತು ಹೆರಿಯಟ್ ಬೀದಿಗಳಲ್ಲಿ ವಾಸಗೃಹಗಳು ಹೆಚ್ಚಾಗಿವೆ. ಹೊಸನಗರದ ಮುಖ್ಯ ಮಾರ್ಗಗಳಾದ ಪ್ರಿನ್ಸ್ ರಸ್ತೆ, ಜಾರ್ಜ್ ರಸ್ತೆ ಮತ್ತು ಕ್ವೀನ್ ರಸ್ತೆಗಳನ್ನು ಅನೇಕ ಅಡ್ಡರಸ್ತೆಗಳು ಸೇರುತ್ತವೆ. ಎಡಿನ್‍ಬರೊದ ಪ್ರಮುಖ ವ್ಯಾಪಾರ ಉದ್ಯಮಗಳ ನೆಲೆಯಾದ ಪ್ರಿನ್ಸ್ ರಸ್ತೆಯ ಪೂರ್ವದ ಅಂಚಿನಲ್ಲಿ ಸ್ಕಾಟ್ಲೆಂಡಿನ ಸಾರ್ವಜನಿಕ ದಸ್ತಾವೇಜುಗಳ ಕಚೇರಿಯೂ ಜಾರ್ಜ್‍ರಸ್ತೆಯ ಪೂರ್ವದ ಅಂಚಿನ ಸಂತ ಆಂಡ್ರ್ಯೂ ಚೌಕದಲ್ಲಿ ಸ್ಕಾಟ್ಲೆಂಡಿನ ರಾಜ್ಯ ಬ್ಯಾಂಕೂ ಇವೆ.

	ನಗರದ ಅನೇಕ ಉದ್ಯಾನವನಗಳಲ್ಲಿ ಮುಖ್ಯವಾದ ಪ್ರಿನ್ಸ್ ರಸ್ತೆಯ ದಕ್ಷಿಣಕ್ಕಿರುವ ಅದೇ ಹೆಸರಿನ ಉದ್ಯಾನವನದಲ್ಲಿ 19ನೆಯ ಶತಮಾನದ ಸಂತ ಕೊತ್ಭರ್ಟನ ಮತ್ತು ಈಚಿನ ಸಂತ ಜಾನನ ಎಪಿಸ್ಕೋಪಲ್ ಚರ್ಚುಗಳೂ ಸರ್ ವಾಲ್ಟರ್ ಸ್ಕಾಟನ ಸ್ಮಾರಕ, ರಾಯಲ್ ಸ್ಕಾಟ್ಸ್‍ಗ್ರೇ ಸ್ಮಾರಕ ಮತ್ತು ಅಮೆರಿಕನ್ ಸ್ಮಾರಕಗಳೂ ಪ್ರೇಕ್ಷಕಣೀಯ ಸ್ಥಳಗಳು. ಇವಲ್ಲದೆ ಸಸ್ಯವೈe್ಞÁನಿಕ ಉಪವನ ಕ್ಯಾಲ್ಟನ್ ಗುಡ್ಡದ ಮೇಲಿರುವ ಅನೇಕ ಐತಿಹಾಸಿಕ ಸ್ಥಳಗಳೂ ವೀಕ್ಷಣಾಲಯ (ಆಬ್ಸರ್ವೇಟರಿ) ಮತ್ತು ಅಪೂರ್ಣವಾಗಿರುವ ರಾಷ್ಟ್ರೀಯ ಸ್ಮಾರಕಗಳೂ ಇಲ್ಲಿವೆ. ನಗರದ ಪಶ್ಚಿಮ ಪರಿಸರದಲ್ಲಿ ಪ್ರಾಣಿ ಸಂಗ್ರಹಾಲಯವಿದೆ. 19ನೆಯ ಶತಮಾನದಲ್ಲಿ ಗ್ರೀಕ್ ಮತ್ತು ಗಾಥಿಕ್ ಶೈಲಿಗಳ ಪುನರ್ವಿಕಾಸ ಕಾಲದಲ್ಲಿ ಅನೇಕ ಚರ್ಚುಗಳೂ ಸಾರ್ವಜನಿಕ ಕಟ್ಟಡಗಳೂ ನಿರ್ಮಿತವಾದುವು. ಸ್ಕಾಟಿಷ್ ನ್ಯಾಷನಲ್ ಗ್ಯಾಲರಿ, ರಾಯಲ್ ಸ್ಕಾಟಿಷ್ ಅಕೆಡಮಿ, ರಾಯಲ್ ಹೈಸ್ಕೂಲಿನ ಕಟ್ಟಡಗಳು ಡೋರಿಕ್ ಮತ್ತು ಅಯೋನಿಕ್ ಶೈಲಿಯಲ್ಲಿವೆ. ನಗರದ ವೀಕ್ಷಣಾಲಯ ರಾಷ್ಟ್ರೀಯ ಸ್ಮಾರಕಗಳು ಡೋರಿಕ್ ಶೈಲಿಯ ಇತರ ನಿರ್ಮಾಣಗಳು.

	ಪ್ರಮುಖ ವ್ಯಕ್ತಿಗಳ ನೆನಪಿಗಾಗಿ ನಿರ್ಮಿತವಾದ ಅನೇಕ ಸ್ಮಾರಕಗಳಲ್ಲಿ ಅಶ್ವಾರೂಢ ಎರಡನೆಯ ಚಾರಲ್ಸನ ಪ್ರತಿಮೆ. 200' ಎತ್ತರದ ಗಾಥಿಕ್ ಶಿಖರವಿರುವ ಸರ್ ವಾಲ್ಟರ್ ಸ್ಕಾಟನ ಸ್ಮಾರಕ, ಸ್ಕಾಟನ ಅಮೃತಶಿಲೆಯ ಪ್ರತಿಮೆ. ಸಂತ ಆಂಡ್ರೂ ಚೌಕದಲ್ಲಿರುವ ಟ್ರೋಜನ್ ಸ್ತಂಭದ ಮೇಲಿರುವ ಹೆನ್ರಿ ಡಂಡಾಸನ ಪ್ರತಿಮೆ. ಕ್ಯಾಲ್ಟನ್ ಗುಡ್ಡದ ಮೇಲಿರುವ ನೆಪೋಲಿಯನ್ನನ ಯುದ್ಧಗಳಲ್ಲಿ ಭಾಗವಹಿಸಿದ್ದ ಸ್ಕಾಟ್ ನಾವಿಕರ ಸ್ಮಾರಕ, ನೆಲ್ಸನ್ ಗೋಪುರ ಮತ್ತು ಸಣ್ಣ ಗ್ರೀಕ್ ದೇವಾಲಯ. ಹಳೆಯ ಕ್ಯಾಲ್ಟನ್ ಶ್ಮಶಾನದಲ್ಲಿರುವ ತತ್ತ್ವe್ಞÁನಿ ಡೇವಿಡ್ ಹ್ಯೂಮ್, ಏಬ್ರಹಾಮ್ ಲಿಂಕನ್ ಸ್ಮಾರಕಗಳು ಮುಖ್ಯವಾದುವು. ಆರನೆಯ ಜೇಮ್ಸ್‍ನ ಸನ್ನದಿಗನುಗುಣವಾಗಿ 1582ರಲ್ಲಿ ಎಡಿನ್‍ಬರೊ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಆ ಸಂಸ್ಥೆಯ ಸ್ಥಾಪಕರು ಕ್ರೇಗ್ ಮಿಲ್ಲರನ ವಿಲ್ಲಿಯಂ ಮತ್ತು ಕ್ಲೆಮೆಂಟ್ ಲಿಟಲ್ ಸಹೋದರರು ಮತ್ತು ಜೇಮ್ಸ್ ಲಾಸನ್, ಆ ಸಂಸ್ಥೆಗೆ ಸೇರಿದಂತೆ ರಾಯಲ್ ಸ್ಕಾಟಿಷ್ ವಸ್ತುಸಂಗ್ರಹಾಲಯ, ಹೆರಿಯಟ್-ವಾಟ್ ಕಾಲೇಜು ಮತ್ತು ದಂತ ವೈದ್ಯಶಾಲೆಗಳಿವೆ. ಜಾರ್ಜ್ ಚೌಕದ ಬಳಿ ಪ್ರಸಿದ್ಧ ವೈದ್ಯವಿದ್ಯಾಲಯವೂ ಇದರ ಪರಿಸರದಲ್ಲಿ ಜಾರ್ಜ್‍ವ್ಯಾಟ್ಸ್‍ನ ಕಾಲೇಜೂ ರಾಯಲ್ ಇನ್‍ಫರ್ಮಂ, ಪಶುವೈದ್ಯಶಾಲೆ, ವಿದ್ಯಾಶಿಕ್ಷಣ ಕಾಲೇಜು, ವ್ಯವಸಾಯ ಕಾಲೇಜು ಮತ್ತು ಕಲಾಶಿಕ್ಷಣ ಶಾಲೆಗಳೂ ಇವೆ. ವಿe್ಞÁನ ಶಿಕ್ಷಣಶಾಲೆಗಳು ಬಹುಮಟ್ಟಿಗೆ ಲಿಬರ್ಟನ್ನಿನಲ್ಲಿರುವ ರಾಜಭವನದಲ್ಲಿವೆ.

	ಜೀರ್ಣಾವಸ್ಥೆಯಲ್ಲಿರುವ ಹಳೆಯ ವೀಕ್ಷಣಾಲಯ (1774) ಕ್ಯಾಲ್ಟನ್ ಗುಡ್ಡದ ಮೇಲೂ ನಗರದ ವೀಕ್ಷಣಾಲಯ ಅದರ ಪಾಶ್ರ್ವದಲ್ಲೂ ಇದ್ದು ಉಪಯೋಗದಲ್ಲಿರುವ ರಾಯಲ್ ಸಮೀಕ್ಷಾಮಂದಿರ (1896) ಬ್ಲ್ಯಾಕ್‍ಫರ್ಡ್ ಗುಡ್ಡದ ಮೇಲೂ ಸ್ಥಾಪಿತವಾಗಿದೆ. ನಿಕಲ್ಸನ್ ರಸ್ತೆಯಲ್ಲಿರುವ ಶಸ್ತ್ರವೈದ್ಯಕಾಲೇಜು, ಕ್ವೀನ್ ಮಾರ್ಗದಲ್ಲಿರುವ ವೈದ್ಯಕಾಲೇಜು, ಗ್ರಂಥಾಗಾರ ಮತ್ತು ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಸಂಗ್ರಹಾಲಯಗಳು ಇತರ ಮುಖ್ಯ ವೈe್ಞÁನಿಕ ಸಂಸ್ಥೆಗಳು. ಮತೀಯ ವಿದ್ಯೆಗಳನ್ನು ಬೋಧಿಸುವ ನ್ಯೂಕಾಲೇಜಿನಲ್ಲಿ ಐಕ್ಯಪ್ರೆಸ್ ಬಿಟೀರಿಯನ್ ಮತ್ತು ಸ್ವತಂತ್ರ ಚರ್ಚು ಪಂಗಡಗಳ ತತ್ತ್ವಗಳನ್ನು ಬೋಧಿಸಲಾಗುತ್ತದೆ. ರಾಯಲ್ ಹೈಸ್ಕೂಲ್, ಎಡಿನ್‍ಬರೊ ಅಕೆಡೆಮಿ, ಫೆಟಿಸ್ ಕಾಲೇಜು- ಇವು ಪ್ರಮುಖ ವಿದ್ಯಾಕೇಂದ್ರಗಳು. ಜಾರ್ಜ್ ಹೆರಿಯಟ್ ಉಚಿತ ವೈದ್ಯಶಾಲೆ ಪ್ರಮುಖ ಸಾರ್ವಜನಿಕ ಸಂಸ್ಥೆಯಾಗಿದೆ. ಇವಲ್ಲದೆ ಅನಾಥಬಾಲಕ ಬಾಲಕಿಯರ ಔದ್ಯೋಗಿಕ ಶಿಕ್ಷಣ ಕೇಂದ್ರಗಳೂ ಉಚಿತ ವೈದ್ಯಶಾಲೆಗಳೂ ಹಲವಾರಿವೆ.

	ಎಡಿನ್‍ಬರೊ ನಗರಾಡಳಿತಕ್ಕೆ ಮಸೆಲ್‍ಬರೊ ಮತ್ತು ಲೀತ್ ಬಂದರು ಪ್ರದೇಶಗಳು ಸೇರಿದ್ದು ನಗರವನ್ನು ಏಳು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸ್ಕಾಟ್ಲೆಂಡು ವಿಭಾಗದ ರಾಜ್ಯ ಸಚಿವ (ಸೆಕ್ರೆಟರಿ ಆಫ್ ಸ್ಟೇಟ್) ಕಾರ್ಯಾಲಯ ಸಂತ ಆಂಡ್ರ್ಯೂಭವನದಲ್ಲಿದೆ. ನಗರಸಭೆಯ 71 ಸದಸ್ಯರಲ್ಲಿ 69 ಮಂದಿ ಚುನಾಯಿತ ಸದಸ್ಯರೂ ಉಳಿದಿಬ್ಬರು ಅಧಿಕೃತ ಸದಸ್ಯರೂ ಆಗಿರುವರು. ನಗರಸಭೆಯ ವಿವಿಧ ಅಧಿಕಾರಿಗಳನ್ನು ಸದಸ್ಯರೇ ಚುನಾಯಿಸುತ್ತಾರೆ. 1833ರ ಮಸೂದೆಯ ಪ್ರಕಾರ ಪ್ರತಿವರ್ಷವೂ ನಗರಸಭೆಯ ಅರ್ಧ ಭಾಗ ಸದಸ್ಯರನ್ನು ಚುನಾಯಿಸಲಾಗುತ್ತದೆ.

	ಇಲ್ಲಿನ ಕೈಗಾರಿಕೆಗಳಲ್ಲಿ ಮದ್ಯದ ತಯಾರಿಕೆ, ಅಚ್ಚುಕಲೆ, ಪುಸ್ತಕಗಳ ರಕ್ಷಾಕವಚ ಜೋಡಿಸುವ ಉದ್ಯಮ, ರಬ್ಬರು, ಬಿಸ್ಕತ್ತು, ಮತ್ತಿತರ ತಿಂಡಿಗಳ ತಯಾರಿಕೆ, ಔಷಧ, ರಾಸಾಯನಿಕ ವಸ್ತು ಮತ್ತು ಗಾಜು ತಯಾರಿಕೆ ಇವು -ಮುಖ್ಯವಾದವು. ಹಡಗುಗಳ ನಿರ್ಮಾಣ, ರಿಪೇರಿ ಕೆಲಸ, ಕಂಬಿ-ಹಗ್ಗಗಳ ತಯಾರಿಕೆ, ಕಬ್ಬಿಣ ಮತ್ತು ಉಕ್ಕಿನ ಉದ್ಯಮ, ಕಾಗದ ತಯಾರಿಕೆ- ಇವು ಇತರ ಕೈಗಾರಿಕೋದ್ಯಮಗಳು. ಇತ್ತೀಚೆಗೆ ಎಲೆಕ್ಟ್ರಾನಿಕ್ ಉದ್ಯಮಗಳೂ ಬೆಳೆಯುತ್ತಿವೆ. 1960ನೆಯ ದಶಕದಲ್ಲಿ ಪ್ರವಾಸೋದ್ಯಮ ಬೆಳೆದು ವರ್ಷಂಪ್ರತಿ 75,000 ಮಂದಿ ಈ ನಗರಕ್ಕೆ ಭೇಟಿ ಕೊಡುತ್ತಿದ್ದಾರೆ. ವಾರ್ಷಿಕ ಅಂತರರಾಷ್ಟ್ರೀಯ ಉತ್ಸವಕ್ಕೆ 90,000 ಮಂದಿ ಪ್ರವಾಸಿಗಳು ಬರುತ್ತಾರೆ. ದೇಶದ ವಿವಿಧಭಾಗಗಳಿಂದ ಬರುವ ರೈಲುಗಾಡಿಗಳೂ ಆರು ಮೈಲಿಗಳ ದೂರದಲ್ಲಿರುವ ಟರ್ನ ಹೌಸ್ ವಿಮಾನ ನಿಲ್ದಾಣವೂ ನಗರದಲ್ಲಿರುವ ಉತ್ತಮ ಮೋಟಾರು ಗಾಡಿಗಳ ವ್ಯವಸ್ಥೆಯೂ ಸಂಚಾರ ವಸತಿಯನ್ನು ಒದಗಿಸುತ್ತದೆ.

	ಈ ನಗರದ ಪರಿಸರದಲ್ಲಿರುವ ಲೀತ್ ಬಂದರು ಸ್ಕಾಟ್ಲೆಂಡಿನ ಪೂರ್ವ ತೀರದಲ್ಲೇ ದೊಡ್ಡದಾದ ರೇವುಪಟ್ಟಣವಾಗಿದ್ದು ಫರ್ತ್-ಆಫ್-ಫೋರ್ತ್‍ನ ಸುರಕ್ಷಿತ ಪ್ರದೇಶದಲ್ಲಿ ಸಮುದ್ರದಿಂದ 30 ಮೈಲಿ ಒಳಪ್ರದೇಶದಲ್ಲಿದೆ. ಸಂಸದೀಯ ಶಾಸನದಿಂದ ಹುಟ್ಟಿದ ಆಡಳಿತ ಮಂಡಲಿಯ ಮೇಲ್ವಿಚಾರಣೆಯಲ್ಲಿರುವ ಈ ಪ್ರದೇಶದಲ್ಲಿ ಒಂದು ಹೊರ ಮತ್ತು ಒಂದು ಒಳ ರೇವೂ ಮೇಲ್ಛಾವಣಿಯಿರುವ ಆರು ಹಡಗು ಕಟ್ಟೆಗಳೂ ಇತ್ತೀಚೆಗೆ ನಿರ್ಮಾಣವಾದ ಆಧುನಿಕ ಬಂದರೂ ಇವೆ. ಈ ಬಂದರಿನಿಂದ ಧಾನ್ಯ, ಸಿಮೆಂಟು, ಮರ, ಉಕ್ಕು-ಕಬ್ಬಿಣ ಮತ್ತು ಗೊಬ್ಬರ ಮುಖ್ಯವಾಗಿ ಆಮದಾಗುತ್ತವೆ. ಕಲ್ಲಿದ್ದಲು, ಕಾಗದ, ಬೀರ್, ಮದ್ಯ ಮುಂತಾದವು ರಫ್ತಾಗುತ್ತವೆ. 

(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ